16/06/2024
ಚಿಲ್ಲರೆ; ಚಿಲ್ಲರೆ ವಿಷಯವಲ್ಲ!
ಈಗ 20 ರೂ. ಕಾಯಿನ್ ಬಂದಿದೆ, 10 ರೂ. ನಾಣ್ಯ ಅಂತೂ ಇಂತೂ ಚಲಾವಣೆ ಆಗುತ್ತಿದೆ. ಆದರೆ ಚಿಲ್ಲರೆ ಕಾಸುಗಳು ಒಂದು ರೂಪಾಯಿಯೋ, ಎರಡೋ, ಹತ್ತು ರೂಪಾಯಿಯೋ, ಇಪ್ಪತ್ತೋ ಎಂದು ಕಂಡುಕೊಳ್ಳಲು ತಿಣುಕಾಡಬೇಕಾಗಿದೆ. ಸರ್ಕಾರ ಹಠ ಬಿದ್ದಂತಿದೆ, ಯಾರಿಗೂ ಇದು ಹತ್ತಾರು ವರ್ಷ ಕಳೆದರೂ ಅರ್ಥವಾಗಬಾರದು, ಹಾಗೆ ನಾಣ್ಯಗಳನ್ನು ರೂಪಿಸಲಾಗಿದೆ.
ಸರ್ಕಾರಗಳು ದೊಡ್ಡ ದೊಡ್ಡ ವಿಷಯದಲ್ಲಿ ನಿರ್ಧಾರ ತೆಗೆದುಕೊಳ್ಳುವಂತೆ ದೊಡ್ಡ ಪರಿಣಾಮ ಬೀರುವ ಸಣ್ಣ ಸಣ್ಣ ವಿಷಯಗಳಲ್ಲೂ ಹೆಚ್ಚು ಗಮನ ಹರಿಸಬೇಕು. ಹಿಂದೆ ಈ ರೀತಿ ಇರಲಿಲ್ಲ. ಅವತ್ತಿನ ಒಂದು, ಎರಡು, ಮೂರು, ಐದು, ಹತ್ತು, ಇಪ್ಪತ್ತು, ಇಪ್ಪತ್ತೈದು, ಐವತ್ತು, ಒಂದು ರೂ.ಗಳೆಲ್ಲ ಭಿನ್ನ ಭಿನ್ನವಾಗಿದ್ದವು. ಅಂಧರು ಕೂಡ ಕೇವಲ ಸ್ಪರ್ಶದಿಂದಲೇ ಆ ನಾಣ್ಯಗಳ ಮೌಲ್ಯವನ್ನು ಅಂದಾಜಿಸಬಹುದಾದಷ್ಟು ವ್ಯವಸ್ಥೆ ನಿಸೂರಾಗಿತ್ತು.
ಹೀಗೂ ತರ್ಕಿಸಬಹುದು. ದೇಶದಲ್ಲಿ ದೀರ್ಘಕಾಲ ಆಡಳಿತ ಮಾಡಿದ ಹಿಂದಿನ ಕಾಂಗ್ರೆಸ್ ಸರ್ಕಾರ ಹತ್ತು ಹಲವು ತಪ್ಪುಗಳನ್ನು ಮಾಡಿದೆ. ಅದಕ್ಕಾಗಿಯೇ ಈಗ ವಾನಪ್ರಸ್ಥವನ್ನೂ ಅನುಭವಿಸುತ್ತಿದೆ. ಅದು ಬಿಡಿ, ಬರೋಬ್ಬರಿ ಅರ್ಧ ಶತಮಾನದ ಆಡಳಿತದಲ್ಲಿ ಅದು ಕೆಲವು ಸರಿಗಳನ್ನೂ ಮಾಡಿದೆ. ಅಂತಹ ಸರಿಗಳನ್ನಾದರೂ ಈಗಿನ ಸರ್ಕಾರ ಅನುಸರಿಸಬೇಕಲ್ಲವೇ? ಅಂತಹವುಗಳಲ್ಲಿ ಒಂದು ಈ ನಾಣ್ಯದ ಆಕಾರ!
ಕೆಲವರಿಗೊಂದು ರೋಗವಿದೆ. ನಾನು ಈ ಸರ್ಕಾರವನ್ನು ಅಭಿಮಾನದಿಂದ ನೋಡುತ್ತೇನೆ ಎಂದರೆ ಅದರ ಎಲ್ಲ ನಡೆಗಳನ್ನು ಸಮರ್ಥಿಸುವುದು! ಅವರು ಹೇಳಬಹುದು, ನಾಣ್ಯಗಳ ಭಿನ್ನ ಭಿನ್ನ ಆಕಾರ ಎಂದರೆ ಸರ್ಕಾರಕ್ಕೆ ಅದರ ತಯಾರಿಕೆಗೆ ಹೆಚ್ಚು ವೆಚ್ಚ ಬೀಳುತ್ತದೆ. ಹಾಗಾಗಿ ಈಗಿನ ಸರ್ಕಾರ ಉಳಿತಾಯದ ದೃಷ್ಟಿಯಿಂದ ಹೀಗೆ ಮಾಡುತ್ತಿದೆ....
ವೇಸ್ಟೇಜ್, ಖರ್ಚು ಎಂಬುದು ಈ ಅಂಕಣಕಾರನಿಗಂತೂ ಗೊತ್ತಿಲ್ಲ. ಆದರೆ ಇವತ್ತಿನ ನಾಣ್ಯವನ್ನು ಹಿಂದಿನ ನಾಣ್ಯದ ಜೊತೆ ಇನ್ನೊಂದು ರೀತಿಯಲ್ಲಿ ಹೋಲಿಸಿ. ಆಗ ನಾಣ್ಯದ ಮುಖದಲ್ಲಿ ಅದರ ಮೌಲ್ಯವನ್ನು ಸಾಮಾನ್ಯ ನೋಟಕ್ಕೇ ಸಿಕ್ಕುವಂತೆ ದೊಡ್ಡದಾಗಿ ಉಬ್ಬು ಮಾದರಿಯನ್ನು ಅನುಸರಿಸಲಾಗುತ್ತಿತ್ತು. ಅದರಿಂದ ಬ್ರೈಲ್ ಲಿಪಿ ಗೊತ್ತಿದ್ದವ ಕಣ್ಣು ಮುಚ್ಚಿಕೊಂಡು ನಾಣ್ಯದ ಮೌಲ್ಯ ಹೇಳಬಹುದಿತ್ತು. ಈಗ ನಾಣ್ಯದ ಮೌಲ್ಯದ ಮುದ್ರಣಕ್ಕಿಂತ ಬೇರೆ ಬೇರೆ ವಿವರಗಳೇ ಹೆಚ್ಚಿರುತ್ತವೆ. 75ನೇ ಸ್ವಾತಂತ್ರ್ಯೋತ್ಸವದ ಎಲ್ಲ ನಾಣ್ಯಗಳೂ ಸಮಸ್ಯೆಯನ್ನೇ ತಂದೊಡ್ಡುವಂತಿವೆ. ವಾದಕ್ಕಿರಲಿ ಅಂತ, ನಾಣ್ಯದಲ್ಲಿ ಈ ತರಹ ಇತರ ವಿಷಯಗಳನ್ನು ಮುದ್ರಿಸುವುದರಿಂದ ಜನಜಾಗೃತಿ ಆಗುತ್ತದೆ ಎಂಬ ಹೊಸ ವಾದ ಮಾತ್ರ ಬೇಡ!
10 ರೂ. ನಾಣ್ಯ ಚಲಾವಣೆಯಿಲ್ಲ ಎಂಬ ವದಂತಿ ಆ ನಾಣ್ಯವನ್ನು ಬ್ಯಾಂಕ್‌ಗಳೇ ಸ್ವೀಕರಿಸಲು ನಿರಾಕರಿಸುವಂತಹ ವಾತಾವರಣ ಸೃಷ್ಟಿಸಿತ್ತು. ಅಂದರೆ ಜನ ಧ್ವನಿ ಎತ್ತಿದರೆ ಅದಕ್ಕೊಂದು ಅಪರೂಪದ ಪ್ರಭಾವ ಇದೆ ಎಂಬುದು ಸ್ಪಷ್ಟ. ಚಿಲ್ಲರೆ ವಿಷಯ ಚಿಲ್ಲರೆಯಲ್ಲ. ಜನ ಈಗಿನ ನಾಣ್ಯಗಳ ಕುರಿತಾದ ಅಸಮಾಧಾನವನ್ನು ದೆಹಲಿ ದೊರೆಗಳಿಗೆ ಸಾಮಾಜಿಕ ಜಾಲತಾಣಗಳಿಂದ ಆರಂಭಿಸಿ ಎಲ್ಲ ವಿಧಾನಗಳಲ್ಲಿ ಮುಟ್ಟಿಸಬೇಕು. ಆದೀತಾ?
[‘ನಂ ಸಮಾಚಾರ’ ಸಾಗರದಿಂದ ಪ್ರಕಟಗೊಳ್ಳುತ್ತಿರುವ ಪಾಕ್ಷಿಕ ಪತ್ರಿಕೆ. ಸಾಗರದಲ್ಲಿರುವವರಲ್ಲದೆ ಸಾಗರ, ಶಿವಮೊಗ್ಗದಿಂದ ಆಚೆ ಇರುವ ಶಿವಮೊಗ್ಗ ಜಿಲ್ಲೆಯವರು, ಅಷ್ಟೇ ಅಲ್ಲ; ಸಾಗರದ ಯಾವ ಸಂಪರ್ಕ ಇಲ್ಲದವರಿಗೂ ಖುಷಿ ಕೊಡುವಂತೆ ಸಂಚಿಕೆಯನ್ನು ರೂಪಿಸುತ್ತಿದ್ದೇವೆ. ಆಸಕ್ತರಿಗೆ ಸ್ಯಾಂಪಲ್ ಸಂಚಿಕೆಯನ್ನು ಪೋಸ್ಟ್ ಅಥವಾ ಪಿಡಿಎಫ್ ಮೂಲಕ ಕಳುಹಿಸುತ್ತೇವೆ. ಆಸಕ್ತಿ ಇದ್ದರೆ ಚಂದಾದಾರರಾಗಬಹುದು. ಚಂದಾದಾರರ ಬಲ ಇದ್ದರೆ ನಾವು ಹೆಚ್ಚು ನಿರ್ಭಿಡೆಯಿಂದ ಸತ್ಯಗಳನ್ನು ಬರೆಯಬಹುದು. ಈಗ ಮೇಲೆ ಓದಿರುವಂತಹ ಬರಹಗಳು, ಚಿಂತನೆಗಳು, ಪುಟ್ಟ ಸ್ನಿಪೆಟ್ಸ್... ತುಂಬಾ ಇವೆ. ಒಮ್ಮೆ ಟ್ರೈ ಮಾಡಿ. ಸಂಪರ್ಕಕ್ಕೆ: 9886407592]